ಜೈನ್ ಗುತ್ತಿಗೆ ಕಂಪನಿ ಕಪ್ಪು ಪಟ್ಟಿ ಸೇರ್ಪಡೆಗೆ ನಿರ್ಧಾರ

ಜೈನ್ ಗುತ್ತಿಗೆ ಕಂಪನಿ ಕಪ್ಪು ಪಟ್ಟಿ ಸೇರ್ಪಡೆಗೆ ನಿರ್ಧಾರ

ಬಾಗಲಕೋಟೆ-

ಬಾಗಲಕೋಟೆ ನಗರಕ್ಕೆ ನೀರು ಸರಬರಾಜು ವ್ಯವಸ್ಥೆ ಕಲ್ಪಿಸುವ ಕಾಮಗಾರಿ ಪೂರ್ಣಗೊಳಿಸುವಲ್ಲಿ ವಿಳಂಬ ನೀತಿ ಅನುಸರಿಸಿದ ಜೈನ್ ಇರಿಗೇಶನ್ ಸಿಸ್ಟಮ್ಸ್ ಲಿಮಿಟೆಡ್ ಗುತ್ತಿಗೆ ಕಂಪನಿಯನ್ನು ಕಪ್ಪು ಪಟ್ಟಿಗೆ ಸೇರಿಸಲು ನಿರ್ಧರಿಸಲಾಗಿದೆ ಎಂದು ನಗರಾಭಿವೃದ್ದಿ ಸಚಿವರಾದ ಬೈರತಿ ಬಸವರಾಜ ತಿಳಿಸಿದರು.

ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿಂದು ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಿಂದ ಕೈಗೊಂಡ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಕಳೆದ 2016 ಮಾರ್ಚ ತಿಂಗಳಲ್ಲಿ ಅಂದಾಜು 72 ಕೋಟಿ ರೂ.ಗಳ ವೆಚ್ಚದ ಟೆಂಡರ್ ಜೈನ್ ಕಂಪನಿಗೆ ನೀಡಿದ್ದು, 2021ಕ್ಕೆ ಪೂರ್ಣಗೊಳ್ಳಬೇಕಾಗಿತ್ತು. ಆದರೆ ಪ್ರಗತಿ ಮಂದಗತಿಯಲ್ಲಿ ನಡೆದಿದ್ದು, ಅದನ್ನು ಕಪ್ಪು ಪಟ್ಟಿಗೆ ಸೇರ್ಪಡೆಗೆ ಕ್ರಮಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ಈಗಾಗಲೇ ಜೈನ್ ಕಂಪನಿಗೆ ನೀಡಿದ ಕಾಮಗಾರಿ ಕೈಬಿಡುವ  ಕುರಿತು ಧಾರವಾಡದ ರಾಜ್ಯ ನಗರ ನೀರು ಸರರಾಜು ಮತ್ತು ಒಳಚರಂಡಿ ಮಂಡಳಿಯ ಮುಖ್ಯ ಇಂಜಿನೀಯರ್ ಅವರಿಗೆ ಪ್ರಸ್ತಾವನೆ ನೀಡಲಾಗಿದೆ. ಅಲ್ಲದೇ ಕಾಮಗಾರಿ ವಿಳಂಬ ನೀತಿಯಿಂದ ಗುತ್ತಿಗೆದಾರರಿಗೆ ಒಳಚರಂಡಿ ಮಂಡಳಿಯ ವ್ಯವಸ್ಥಾಪಕ ನಿರ್ದೇಶಕರಿಂದ ನೋಟಿಸ್ ನೀಡಿ ವಿವರಣೆ ನೀಡಲು ನಿರ್ದೇಶನ ನೀಡಿದ್ದು, ತಪ್ಪಿದಲ್ಲಿ ಗುತ್ತಿಗೆ ರದ್ದುಪಡಿಸಲು ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿನ ಕುಡಿಯುವ ನೀರು ಮತ್ತು ಒಳಚರಂಡಿಗಾಗಿ ಕೈಗೊಂಡ ಕಾಮಗಾರಿಗಳನ್ನು ಮುಂದಿನ 2-3 ತಿಂಗಳಲ್ಲಿ ಪೂರ್ಣಗೊಳಿಸಲು ಸೂಚಿಸಿದರು. ಸರಕಾರ ಸಾರ್ವಜನಿಕರಿಂದ ಬಂದ ಕರದ ಹಣವನ್ನು ಮೂಲಭೂತ ಸೌಲಭ್ಯಗಳಿಗಾಗಿ ಖರ್ಚು ಮಾಡಲಾಗುತ್ತಿದೆ. ನಿಗದಿತ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸಿ ಸಾರ್ವಜನಿಕರಿಗೆ ಸೌಲಭ್ಯ ಒದಗಿಸುವ ಕೆಲಸವಾಗಬೇಕು ಎಂದರು. ಜಿಲ್ಲೆಯ ಜನರಿಗೆ ಸಮರ್ಪಕ ನೀರು ಪೂರೈಕೆಯಾಗುವ ನಿಟ್ಟಿನಲ್ಲಿ ಎಲ್ಲ ರೀತಿಯ ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲೆಯ ಬಾದಾಮಿ, ಕೆರೂರ ಹಾಗೂ ಗುಳೇದಗುಡ್ಡ ನಗರ ಹಾಗೂ 18 ಗ್ರಾಮಗಳಿಗೆ ಕುಡಿಯುವ ನೀರು ಪೂರೈಸಲು ಆಲಮಟ್ಟಿಯಿಂದ ನೀರು ತರಲು 220 ಕೋಟಿ ರೂ.ಗಳ ವೆಚ್ಚದಲ್ಲಿ ಕಾಮಗಾರಿ ಕೈಗೊಳ್ಳಲಾಗಿದೆ. ಇದರಿಂದ ಸಮಪರ್ಕವಾದ ನೀರು ಪೂರೈಕೆಯಾಗಲಿದೆ ಎಂದರು. ಮೂಲಭೂತ ಸೌಲಭ್ಯಕ್ಕೆ ಹೆಚ್ಚಿನ ಒತ್ತು ನೀಡುವ ಮೂಲಕ ಸೌಲಭ್ಯಗಳನ್ನು ಕಲ್ಪಿಸಲು ಅಧಿಕಾರಿಗಳಿಗೆ ಸೂಚಿಸಿದರು. ಮುಂದಿನ ಎರಡು ತಿಂಗಳು ಬಿಟ್ಟು ಪುನಃ ಜಿಲ್ಲೆಗೆ ಆಗಮಿಸಿ ಕಾಮಗಾರಿ ಪ್ರರಿಶೀಲಿಸಲಾಗುವುದೆಂದು ಸಚಿವರು ತಿಳಿಸಿದರು.

Previous ಉತ್ತರ ಭಾರತದ ನಟಿಯರಿಂದ, ಕನ್ನಡ ಚಿತ್ರರಂಗಕ್ಕೆ ಕೆಟ್ಟ ಹೆಸರು - ಜಗ್ಗೇಶ್
Next ಸಾವಿನ ಪ್ರಮಾಣ ಇಳಿಕೆಯತ್ತ ಗಮನಹರಿಸಿ, ಹಾಸಿಗೆ ಕೊರತೆಯಾಗದಂತೆ ನೋಡಿಕೊಳ್ಳಿ

You might also like

0 Comments

No Comments Yet!

You can be first to comment this post!

Leave a Reply