ಹುಲಿಯ ಹಾಲಿನ ಮೇವು ಸಿನಿಮಾದಲ್ಲಿ ವರನಟ ಡಾ.ರಾಜ್ ರೊಂದಿಗೆ ಸೆಣಸಿದ ಪೈಲ್ವಾನ್ ಗೌಡಪ್ಪ.

ಹುಲಿಯ ಹಾಲಿನ ಮೇವು ಸಿನಿಮಾದಲ್ಲಿ ವರನಟ ಡಾ.ರಾಜ್ ರೊಂದಿಗೆ ಸೆಣಸಿದ ಪೈಲ್ವಾನ್ ಗೌಡಪ್ಪ.

ಧಾರವಾಡ . ನಗರದಿಂದ ಕೂಗಳತೆಯ ದೂರದಲ್ಲಿರುವ ತಡಸಿನಕೊಪ್ಪ ಗ್ರಾಮ ಒಂದು ಅರ್ಥದಲ್ಲಿ ಪೈಲ್ವಾನರ ಊರೇ ಸರಿ. ಇಲ್ಲಿನ ಪ್ರತಿ ಮನೆಗಳಲ್ಲಿಯೂ ಕುಸ್ತಿಪಟುಗಳಿದ್ದಾರೆ. ಅವರಲ್ಲಿ ಕುಸ್ತಿಯನ್ನೇ ತಮ್ಮ ಬದುಕಿನ ಉಸಿರಾಗಿಸಿಕೊಂಡಿರುವ ಹಿರಿಯ ಪೈಲ್ವಾನ್‍ರೊಬ್ಬರಿದ್ದಾರೆ. 1979 ರಲ್ಲಿ ತೆರೆಕಂಡ ಹುಲಿಯ ಹಾಲಿನ ಮೇವು ಸಿನೆಮಾದಲ್ಲಿ ವರನಟ ಡಾ.ರಾಜ್ ಕುಮಾರ ಅವರೊಂದಿಗೆ ಕುಸ್ತಿ ಆಡುವ ಸನ್ನಿವೇಶದಲ್ಲಿ ಕಾಣಿಸಿಕೊಂಡಿರುವ ಸವಿನೆನಪಿನೊಂದಿಗೆ ಬದುಕು ಸವೆಸುತ್ತಿರುವ ತಡಸಿನಕೊಪ್ಪದ ಮಾಜಿ ಪೈಲ್ವಾನ್ ಗೌಡಪ್ಪ ಪರಪ್ಪ ಮುದಿಗೌಡ್ರ ಪ್ರಮುಖರು. ಇಳಿವಯಸ್ಸಿನಲ್ಲಿ ಮಧುಮೇಹದ ಕಾರಣದಿಂದ ಒಂದು ಕಾಲು ಕತ್ತರಿಸಿಕೊಂಡಿದ್ದರು. ಜೀವನ ಪ್ರೀತಿ, ಆತ್ಮವಿಶ್ವಾಸ ಕಡಿಮೆಯಾಗಿಲ್ಲ. ಧಾರವಾಡದಲ್ಲಿ ಫೆಬ್ರವರಿ 22 ರಿಂದ 25 ರವರೆಗೆ ಕರ್ನಾಟಕ ಕುಸ್ತಿ ಹಬ್ಬ ನಡೆಯುತ್ತಿರುವುದು ಅವರಲ್ಲಿ ಸಂತಸದ ಗರಿಗೆದರಿಸಿದೆ .

ತಡಸಿನಕೊಪ್ಪ ಗ್ರಾಮದ ಗರಡಿ ಮನೆ ಹತ್ತಿರದಲ್ಲಿಯೇ ಮನೆ ಹೊಂದಿರುವ, ಪೈಲ್ವಾನ್ ಗೌಡಪ್ಪ ಅವರಿಗೆ ವಂಶಪಾರಂಪರ್ಯವಾಗಿಯೇ ಕುಸ್ತಿ ಒಲಿದು ಬಂದಿದೆ. ಪ್ರಾರಂಭದಲ್ಲಿ ಹುಟ್ಟೂರಿನ ಪರಪ್ಪ ಅವರಲ್ಲಿ ಕುಸ್ತಿಯ ಪ್ರಾಥಮಿಕ ಜ್ಞಾನ ಪಡೆದು ಆ ರಂಗದಲ್ಲಿ ತೀವ್ರ ಆಸಕ್ತಿ ತಾಳಿದರು. ನಂತರ ಹೆಚ್ಚಿನ ಕುಸ್ತಿ ಕಲಿಕೆಗಾಗಿ ಬೆಳಗಾವಿಯ ದರ್ಗಾದ ಖಾದರ್ ಪೈಲ್ವಾನ್, ಕೊಲ್ಹಾಪುರದ ಬಾಬು ಬಿರಾದಾರ್, ಧಾರವಾಡ ಕರ್ನಾಟಕ ವ್ಯಾಯಾಮ ಶಾಲೆಯ ಮಾರುತಿ ಪೈಲ್ವಾನ್, ಮೈಸೂರು ಅಕ್ಬರ್ ರಸ್ತೆಯ ಗೌಡಯ್ಯನ ಗರಡಿಯಲ್ಲಿ  ತರಬೇತಿ ಪಡೆದರು. ನಂತರ ಹುಟ್ಟೂರು ತಡಸಿನಕೊಪ್ಪಕ್ಕೆ ಮರಳಿ ಮದುವೆಯಾಗಿ ಮಕ್ಕಳಾದ ಬಳಿಕ,  ಗ್ರಾಮದಲ್ಲಿ ಕುಸ್ತಿ ಗೆದ್ದು ಮೆರವಣಿಗೆ ಮಾಡಿಕೊಂಡು ಬರುತ್ತಿದ್ದ ಗುಂಪೆÇಂದನ್ನು ನೋಡಿ ಮತ್ತೆ ಕುಸ್ತಿಯತ್ತ ಆಕರ್ಷಿತರಾದರು. ಬೆಂಗಳೂರು ಬಳಿಯ ದೊಡ್ಡಬಳ್ಳಾಪುರಕ್ಕೆ ತೆರಳಿ ಅಲ್ಲಿ ದೊಡ್ಡಣ್ಣ ಎಂಬ ಕುಸ್ತಿ ಅಭಿಮಾನಿಯೊಬ್ಬರ ನೆರವಿನಿಂದ ಕುಸ್ತಿ ತಾಲೀಮು ಮುಂದುವರೆಸಿದರು. ಪಂಜಾಬದ ಮಿಲ್ಟ್ರಿ ಶರ್ಮಾ ಅವರಿಂದಲೂ ತರಬೇತಿ ಪಡೆದರು. ಆ ದಿನಗಳಲ್ಲಿ ಆಡಿದ ಯಾವೊಂದು ಕುಸ್ತಿಯಲ್ಲಿಯೂ ಚಿತ್ ಆಗದ ಇವರು. ದೊಡ್ಡಬಳ್ಳಾಪುರದ ಕೆರೆ ಬಳಿ ಹುಲಿಯ ಹಾಲಿನ ಮೇವು ಚಲನಚಿತ್ರದ ಕುಸ್ತಿ ಅಖಾಡದ ದೃಶ್ಯ ಚಿತ್ರೀಕರಣ ವೇಳೆ ಅಲ್ಲಿಯೇ ಇದ್ದ ಗೌಡಪ್ಪನವರನ್ನು ಗುರುತಿಸಿ ಡಾ.ರಾಜ್ ಕುಮಾರ್ ಅವರೊಂದಿಗೆ ಸೆಣಸಾಡುವ ಅವಕಾಶ ನೀಡಿದರು .ಚಲನಚಿತ್ರದಲ್ಲಿ ರಾಜ್ ಅವರಿಂದ ಚಿತ್ ಆಗುವ ಸನ್ನಿವೇಶದಲ್ಲಿ ಕಾಣಿಸಿಕೊಳ್ಳುವ ಅವಕಾಶ ಆಕಸ್ಮಿಕವಾಗಿ ಪಡೆದುಕೊಂಡರು. ಆ ನೆನಪನ್ನೂ ಇಂದಿಗೂ ಹಸಿರಾಗಿಸಿಕೊಂಡಿರುವ ಗೌಡಪ್ಪನವರು ತಮ್ಮ ಮೈಕಟ್ಟು, ಕುಸ್ತಿ ಪ್ರೀತಿ ಎಲ್ಲವನ್ನೂ ಡಾ.ರಾಜ್ ಮೆಚ್ಚಿಕೊಂಡಿದ್ದನ್ನು ಹೆಮ್ಮೆಯಿಂದ ಸ್ಮರಿಸುತ್ತಾರೆ.

ಇಬ್ಬರು ಪತ್ನಿಯರು ಒಟ್ಟು ಒಂಭತ್ತು ಮಕ್ಕಳ ತುಂಬು ಕುಟುಂಬದೊಂದಿಗೆ ಜೀವನ ನಿರ್ವಹಿಸುತ್ತಿರುವ ಗೌಡಪ್ಪನವರಿಗೆ ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ಮಾಜಿ ಪೈಲ್ವಾನರಿಗೆ ನೀಡುವ ಮಾಸಿಕ 2,500 ರೂ.ಪಿಂಚಣಿ ಬರುತ್ತಿದೆ. ಇಂದಿನ ಪೀಳಿಗೆ ಓದಿನೊಂದಿಗೆ ಕುಸ್ತಿ, ಕ್ರೀಡೆ ಯಾವುದಾದರೂ ಒಂದು ಪಠ್ಯೇತರ ಚಟುವಟಿಕೆಯಲ್ಲಿ ತೊಡಗಿಕೊಳ್ಳಲೇಬೇಕು.

Previous ಬಡ ಕುಟುಂಬಕ್ಕೆ ಬಸವಣ್ಣ ಧನ ಸಹಾಯ
Next ಕೂದಲೆಳೆ ಅಂತರದಲ್ಲಿ ನಟಿ ಕಾಜಲ್ ಅಗರವಾಲ್ ಪಾರು…!

You might also like

0 Comments

No Comments Yet!

You can be first to comment this post!

Leave a Reply